ವಿಭೀಷಣ
	ರಾವಣನ ಕಿರಿಯ ಸಹೋದರ. ಏಳುಮಂದಿ ಚಿರಂಜೀವಿ ಗಳಲ್ಲಿ ಒಬ್ಬ. ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ಕೃಪಾಚಾರ್ಯ ಮತ್ತು ಪರಶುರಾಮ ಉಳಿದ ಚಿರಂಜೀವಿಗಳು. ಇವನದು ಅಣ್ಣನಿಗೆ ವಿರುದ್ಧವಾದ ವ್ಯಕ್ತಿತ್ವ. ರಾಮಾಯಣದಲ್ಲಿ ವಿಭೀಷಣನ ಬಗೆಗಿನ ವಿವರಗಳು ಹೀಗಿವೆ : ಸುಮಾಲಿಯ ಮಗಳು ಕೈಕಸೆ ಅರಿಯದೆ, ಪ್ರದೋಷಕಾಲದಲ್ಲಿ ಪುಲಸ್ತ್ಯನ ಮಗ ವಿಶ್ರವಸುವನ್ನು ಮೋಹಿಸಿದಳು. ಇದರಿಂದ ಕ್ರೂರಕರ್ಮಿಗಳಾದ ರಾಕ್ಷಸ ಮಕ್ಕಳು ಹುಟ್ಟುವರೆಂದು ತಿಳಿದ ಕೈಕಸೆ ದುಷ್ಟ ಪುತ್ರರನ್ನು ಬಯಸದೆ ಸತ್ಪುತ್ರರನ್ನು ಬೇಡಿದಳು. ಕಡೆಯ ಮಗ ಮಾತ್ರ ಧರ್ಮಾತ್ಮನಾಗುವನೆಂದು ಮುನಿನುಡಿದ. ಕೈಕಸೆಗೆ ರಾವಣ, ಕುಂಭಕರ್ಣ, ಶೂರ್ಪಣಖಿ ಮತ್ತು ವಿಭೀಷಣ ಎಂಬ ಮಕ್ಕಳಾ ದರು. ಇವರಲ್ಲಿ ಮೊದಲ ಮೂವರು ಕ್ರೂರಿಗಳಾದರು. ಕಿರಿಯವನಾದ ವಿಭೀಷಣ ಜನಿಸಿದಾಗ ದೇವದುಂದುಭಿ ಮೊಳಗಿತು. 

	ವಿಭೀಷಣ ವೇದಾಧ್ಯಾಯಿ, ಧರ್ಮನಿಷ್ಠ. ಏಕಪಾದದಲ್ಲಿ ನಿಂತು ಐದು ಸಾವಿರ ವರ್ಷ ಊಧ್ರ್ವಮುಖಿಯಾಗಿ ಐದು ಸಾವಿರ ವರ್ಷ ಹೀಗೆ ಹತ್ತು ಸಹಸ್ರವರ್ಷ ಕಠಿಣ ತಪಸ್ಸುಮಾಡಿ ಬ್ರಹ್ಮನನ್ನು ಒಲಿಸಿದ. ಬ್ರಹ್ಮ ಪ್ರತ್ಯಕ್ಷನಾದಾಗ ತನಗೆ ವಿಪತ್ತಿನಲ್ಲಿಯೂ ಧರ್ಮದಲ್ಲಿ ಬುದ್ಧಿ ನೆಲಸಿರು ವಂತೆ, ಬ್ರಹ್ಮಾಸ್ತ್ರ ಮಂತ್ರ ಸ್ಫುರಿಸುವಂತೆ ಧರ್ಮಪಾಲನೆಯಲ್ಲಿ ದೃಢತೆ ಇರುವಂತೆ ಬೇಡಿದ. ಬ್ರಹ್ಮ ಮೆಚ್ಚಿ ಈತನಿಗೆ ಅಮರತ್ವವನ್ನು ದಯಪಾಲಿಸಿದ. ಈತ ಶೈಲೂಷ ಎಂಬ ಗಂಧರ್ವರಾಜನ ಮಗಳು ಸರಮೆಯನ್ನು ವಿವಾಹವಾಗಿದ್ದ. 

	ಸೀತಾಪಹರಣ ಸಂದರ್ಭದಲ್ಲಿ ರಾವಣನಿಗೆ ವಿಭೀಷಣ ಬುದ್ಧಿಹೇಳಿದ. ರಾವಣ ಇವನ ಮಾತನ್ನು ಧಿಕ್ಕರಿಸಿದ. ಆಗ ಈತ ರಾಮನಿಗೆ ಬೆಂಬಲವಾಗಿ ನಿಂತು ಕುಂಭಕರ್ಣ, ಇಂದ್ರಜಿತು ಮೊದಲಾದವರ ವೃತ್ತಾಂತಗಳನ್ನು ತಿಳಿಸಿದ. ರಾಮನ ಸೇನೆಯ ರಹಸ್ಯವನ್ನು ಅರಿಯಲು ಬಂದಿದ್ದ ಶಾರ್ದೂಲ ಮೊದಲಾದವರನ್ನು ಗುರುತಿಸಿ ನಿಗ್ರಹಿಸಿದ. ಮಾಯಾಸೀತೆಯ ವಧೆಯನ್ನು ಕಂಡು ರಾಮ ದುಃಖಿಸುತ್ತಿದ್ದಾಗ ವಿಭೀಷಣ ಅದರ ಮರ್ಮವನ್ನು ತಿಳಿಸಿ ಸಮಾಧಾನಪಡಿಸಿದ. ರಾವಣನ ಸಂಹಾರವಾದಾಗ ಅಣ್ಣನಿಗಾಗಿ ಶೋಕಿಸಿದ. ರಾಮನ ಆಣತಿಯಂತೆ ರಾವಣನ ಅಂತ್ಯಕ್ರಿಯೆಗಳನ್ನು ನಿರ್ವಹಿಸಿದ. ರಾವಣನ ತರುವಾಯ ವಿಭೀಷಣನಿಗೆ ಲಂಕೆಯ ಪಟ್ಟವಾಯಿತು. ರಾಮನಿಗೆ ಪುಷ್ಪಕ ವಿಮಾನವನ್ನು ಕೊಡುಗೆಯಾಗಿತ್ತ. ರಾಮಪಟ್ಟಾಭಿಷೇಕ ಉತ್ಸವದಲ್ಲಿ ಭಾಗವಹಿಸಿದ್ದ. ರಾಮ ಮಹಾಪ್ರಸ್ಥಾನಕ್ಕೆ ತೆರಳುವ ಮುನ್ನ ವಿಭೀಷಣನಿಗೆ ಚಂದ್ರ, ಸೂರ್ಯ, ಮೇದಿನಿ ಇರುವವರೆಗೆ, ನನ್ನ ಕಥೆ ಲೋಕದಲ್ಲಿ ಪ್ರಚಾರದಲ್ಲಿರುವವರೆಗೆ ಲಂಕೆಯ ಒಡೆತನ ನಿನಗಿರಲಿ ಎಂದು ಹೇಳಿದ. 

	ಮಹಾಭಾರತದ ಪ್ರಕಾರ ವಿಭೀಷಣ ವಿಶ್ರವಸು ಮುನಿಯಿಂದ ಮಾಲಿನಿ ಎಂಬವಳಲ್ಲಿ ಜನಿಸಿದನೆಂದೂ ಘಟೋತ್ಕಚನ ಮೂಲಕ ಪಾಂಡವರಿಗೆ ಕಪ್ಪವನ್ನು ಸಲ್ಲಿಸಿದನೆಂದೂ ತಿಳಿದುಬರುತ್ತದೆ. 

	ಲಂಕೆಗೆ ರಾಮ ಕಟ್ಟಿದ್ದ ಸೇತುವೆ ಇದ್ದರೆ ವೈರಿ ಭಯ ಹೆಚ್ಚುವುದೆಂದು ವಿಭೀಷಣ ತಿಳಿಸಿದಾಗ ರಾಮ ಸೇತುವೆಯನ್ನು ಬಿಲ್ಲಿನಿಂದ ಕತ್ತರಿಸಿದ ನೆಂದು ಸ್ಕಾಂದಪುರಾಣದಲ್ಲಿ ಉಕ್ತವಾಗಿದೆ. ರಂಗನಾಥಸ್ವಾಮಿಯ ವಿಗ್ರಹ ವನ್ನು ರಾಮ ವಿಭೀಷಣನಿಗೆ ಆರಾಧ್ಯಮೂರ್ತಿಯಾಗಿ ನೀಡಿದನೆಂದು ಪದ್ಮಪುರಾಣ ತಿಳಿಸುತ್ತದೆ. 

	ವಿಭೀಷಣ ರಾವಣನಿಗೆ ಹೇಳಿದ ಬುದ್ಧಿವಾದ ವಿಭೀಷಣ ನೀತಿ ಎಂದು ಖ್ಯಾತವಾಗಿದೆ. ಕನ್ನಡದಲ್ಲಿ ಕುಮಾರವಾಲ್ಮೀಕಿಯ ತೊರವೆರಾಮಾಯಣದಿಂದ ಆಯ್ದು ಸಂಕಲಿಸಿದ ವಿಭೀಷಣ ನೀತಿ ಎಂಬ ಹಸ್ತಪ್ರತಿಗಳು ದೊರೆಯುತ್ತವೆ.		
(ವೈ.ಸಿ.ಬಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ